ಭಾನುವಾರ, ಜೂನ್ 21, 2009

ಗ್ರಾಹಕರ ಹಿತರಕ್ಷಣೆಯಲ್ಲಿ ತೂಕ ಮತ್ತು ಅಳತೆಗಳ ಮಹತ್ವ-ಸಾಮಾಜಿಕ,ಧಾರ್ಮಿಕ ಹಾಗೂ ಕಾನೂನುಗಳ ಹಿನ್ನಲೆಯ ವಿಶ್ಲೇಷಣೆ.

ಆಧಾರ: ಕಾನೂನು ಮಾಪನ ಶಾಸ್ತ್ರ ಇಲಾಖೆಯ ಗ್ರಾಹಕರ ಮಾರ್ಗದರ್ಶಿಯಲ್ಲಿ, ಮಹಮದ್ ಅನ್ವರ್,ಸಹಾಯಕ ನಿಯಂತ್ರಕರು ಅವರ ಲೇಖನ.
ಗ್ರಾಹಕರ ಹಿತರಕ್ಷಣೆಯಲ್ಲಿ ತೂಕ ಮತ್ತು ಅಳತೆಗಳ ಮಹತ್ವ-ಸಾಮಾಜಿಕ,ಧಾರ್ಮಿಕ ಹಾಗೂ ಕಾನೂನುಗಳ ಹಿನ್ನಲೆಯ ವಿಶ್ಲೇಷಣೆ.
ಗ್ರಾಹಕರ ಹಿತರಕ್ಷಣೆಯಲ್ಲಿ ತೂಕ ಮತ್ತು ಅಳತೆಯ ಕಾನೂನುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.ಜನರ ನಿತ್ಯಜೀವನದಲ್ಲಿ ತೂಕ ಮಾಡುವುದು,ಅಳತೆ ಮಾಡುವುದು ಮತ್ತು ಎಣಿಕೆ ಮಾಡುವುದು ಸಾಮಾನ್ಯ ವಾಗಿದೆ.ಮೇಲಿನ ಯಾವುದೇ ಕ್ರಿಯೆಯಲ್ಲಿ ನಿಖರತೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಮೇಲ್ಕಂಡ ಯಾವುದೇ ಕ್ರಿಯೆಯು ಸಾರ್ವಜನಿಕವಾದಾಗ ಅದಕ್ಕೆ ರೀತಿ ನೀತಿಗಳು ಅವಶ್ಯಕವಾಗಿರುತ್ತವೆ.ತೂಕ,ಅಳತೆ ಮತ್ತು ಎಣಿಕೆ ಮಾಡುವ ಸಾರ್ವಜನಿಕ ಕ್ರಿಯೆಗೆ ರೀತಿ ನೀತಿಗಳನ್ನು ನಿಗಧಿಪಡಿಸುವುದೇ ತೂಕ ಮತ್ತು ಅಳತೆ ಕಾನೂನಾಗಿದೆ.ಪ್ರಾಚೀನ ಕಾಲದಿಂದಲೂ ಜನಜೀವನದ ಹಾಸುಹೊಕ್ಕಾಗಿ ತೂಕ,ಅಳತೆ ಮತ್ತು ಎಣಿಕೆ ಕ್ರಿಯೆಯು ನಡೆಯುತ್ತಾ ಬಂದಿದೆ.ಹೀಗೆ ಕಾಲಾನುಕ್ರಮದಲ್ಲಿ ಬಳಕೆಗೆ ಬಂದ ತೂಕ ಮತ್ತು ಅಳತೆಗೆ ಸಂಬಂಧಿಸಿದ ವ್ಯವಹಾರವು ಚಾಣಾಕ್ಯನ ಕಾಲದಲ್ಲಿ ಒಂದು ನಿಯಮಾವಳಿಯಾಗಿ ಸ್ಪಷ್ಟ ರೂಪವನ್ನು ಪಡೆಯಿತು.
ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ತೂಕ ಮತ್ತು ಅಳತೆಗಳ ಮಹತ್ವ:
ಮೌರ್ಯರ ಆಡಳಿತದಲ್ಲಿ ವಿವಿಧ ಇಲಾಖೆಗಳನ್ನು ಸ್ಥಾಪಿಸಲಾಗಿದ್ದು,ಅಸ್ತಿತ್ವದಲ್ಲಿದ್ದ ಒಟ್ಟು 33 ಇಲಾಖೆಗಳಲ್ಲಿ 13ನೇ ಇಲಾಖೆಯೆ ತೂಕ ಮತ್ತು ಅಳತೆಗಳಿಗೆ ಸಂಬಂಧಿಸಿದ್ದಾಗಿತ್ತು. "Panthavadyaksha" ಎಂಬ ಹೆಸರನ್ನು ಇಲಾಖಾ ಮುಖ್ಯಸ್ಥರಿಗೆ ನೀಡಲಾಗಿತ್ತು.ಇಲಾಖಾ ಮುಖ್ಯಸ್ಥರಿಗೆ ಪ್ರಮಾಣಬದ್ಧ ತೂಕ ಮತ್ತು ಅಳತೆಗಳನ್ನು ತಯಾರಿಸಲು ಕಾರ್ಯಾಗಾರಗಳನ್ನು ಸ್ಥಾಪಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು.ತೂಕದ ಬಟ್ಟುಗಳನ್ನು ಕಬ್ಬಿಣದಿಂದ,ಅಳತೆ ಪಾತ್ರೆಗಳನ್ನು ಗಟ್ಟಿಯಾದ ಒಣಗಿದ ಮರದಿಂದ ತಯಾರಿಸಲು ಆದೇಶ ನೀಡಲಾಗಿತ್ತು.ಧಾನ್ಯಗಳನ್ನು ಅಳತೆ ಮಾಡಲು ಶಂಖಾಕಾರದ ಅಳತೆ ಪಾತ್ರೆಯನ್ನು,ದ್ರವಗಳನ್ನು ಅಳತೆ ಮಾಡಲು ನಿರ್ಧಿಷ್ಟ ಮಾದರಿಯ ಅಳತೆ ಪಾತ್ರೆಯನ್ನು ಹಾಗೂ ಮದ್ಯವನ್ನು ಅಳೆಯಲು ಇನ್ನೊಂದು ರೀತಿಯ ಅಳತೆ ಪಾತ್ರೆಯನ್ನು ನಿಗಧಿಪಡಿಸಲಾಗಿತ್ತು.ಹಣ್ಣು,ಹೂ,ಇನ್ನಿತರ ವಸ್ತುಗಳನ್ನು ಮಾರಾಟ ಮಾಡಲು ಬೇರೆ ರೀತಿಯ ಅಳತೆಯನ್ನು ನಿಗಧಿಪಡಿಸಲಾಗಿತ್ತು. ವ್ಯಾಪಾರಸ್ಥರು ಪ್ರತಿ ನಾಲ್ಕು ತಿಂಗಳಿಗೊಮ್ಮೆ ನಿಗಧಿತ ಶುಲ್ಕವನ್ನು ಪಾವತಿ ಮಾಡಿ,ಸತ್ಯಾಪನೆ ಮತ್ತು ಮುದ್ರೆಯನ್ನು ಮಾಡಿಸಿಕೊಳ್ಳಬೇಕಾಗಿತ್ತು.ಸತ್ಯಾಪನೆ ಮತ್ತು ಮುದ್ರೆಯನ್ನು ಮಾಡಿಸದೇ ಉಪಯೋಗಿಸುವ ತೂಕ ಮತ್ತು ಅಳತೆಗಳಿಗೆ ಇಪ್ಪತ್ತೇಳು ಕಾಲು ಪಣಗಳನ್ನು ದಂಡವಾಗಿ ಕೊಡಬೇಕಾಗಿತ್ತು.ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಕೋಷ್ಟಕಗಳು,ಪರಿವರ್ತನೆಗಳು, ಸತ್ಯಾಪನೆ ಮಾಡುವ ಕ್ರಿಯೆಯನ್ನು ಸ್ಪಷ್ಟವಾಗಿ ಹೇಳಲಾಗಿದೆ.ಕೌಟಿಲ್ಯನ ಅರ್ಥಶಾಸ್ತ್ರದ ಅನುಬಂಧ-1ರಲ್ಲಿ ಎಲ್ಲಾ ವಿವರಗಳನ್ನು ನಾವು ನೋಡಬಹುದು.ಸಾರ್ವಜನಿಕರ ಹಿತದೃಷ್ಟಿಯಿಂದ ಮೌರ್ಯರ ಆಳ್ವಿಕೆಯಲ್ಲಿ ಅದೆಷ್ಟು ಮಹತ್ವವನ್ನು ತೂಕ ಮತ್ತು ಅಳತೆಗಳಿಗೆ ನೀಡಿದ್ದರೆಂದರೆ,ಅರ್ಥಶಾಸ್ತ್ರದಲ್ಲಿನ ಒಟ್ಟು 15 ಅನುಬಂಧಗಳಲ್ಲಿ ಮೊದಲನೆಯದೇ ತೂಕ ಮತ್ತು ಅಳತೆಗಳಿಗೆ ಸಂಬಂಧಿಸಿದ್ದು.
ಇಂಡಿಯನ್ ಪೆನಲ್ ಕೋಡ್ 1860ರಲ್ಲಿ ತೂಕ ಮತ್ತು ಅಳತೆಗಳ ನಿಯಂತ್ರಣ:
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 264,265,266ಮತ್ತು 267(ಅಧ್ಯಾಯ13)ರಲ್ಲಿ ತೂಕ ಮತ್ತು ಅಳತೆಗಳ ಬಗ್ಗೆ ಸ್ಪಷ್ಟ ನಿಯಂತ್ರಣಗಳನ್ನು ಹೇರಲಾಗಿದೆ.
ಸೆಕ್ಷನ್ 264 :ತಪ್ಪು ತೂಕ ಮತ್ತು ಅಳತೆ ಸಾಧನಗಳನ್ನು ಉಪಯೋಗಿಸುವವರಿಗೆ 1 ವರ್ಷದವರೆಗೆ ಜೈಲುವಾಸ ಹಾಗೂ ದಂಡ.
ಸೆಕ್ಷನ್ 265 :ತೂಕ ಮತ್ತು ಅಳತೆಗಳನ್ನು ಮೋಸ ಮಾಡುವ ಉದ್ದೇಶದ ಸಲುವಾಗಿ, ಅಥವಾ ಸರಿಯಿಲ್ಲದ ತೂಕ ಮತ್ತು ಅಳತೆಗಳನ್ನು ಉಪಯೋಗಿಸುವವರಿಗೆ 1ವರ್ಷದ ಜೈಲುವಾಸ ಅಥವಾ ದಂಡ ಅಥವಾ ಎರಡನ್ನೂ.
ಸೆಕ್ಷನ್ 266 :ಸರಿಯಿಲ್ಲದ ತೂಕ ಮತ್ತು ಅಳತೆಗಳನ್ನು ಹೊಂದಿರುವವರಿಗೆ 1 ವರ್ಷದ ಜೈಲುವಾಸ ಅಥವಾ ದಂಡ .
ಸೆಕ್ಷನ್ 267 :ಸರಿಯಿಲ್ಲದ ತೂಕ ಮತ್ತು ಅಳತೆಗಳನ್ನು ತಯಾರು ಮಾಡುವವರಿಗೆ ಅಥವಾ ಮಾರಾಟ ಮಾಡುವವರಿಗೆ 1 ವರ್ಷದ ಜೈಲುವಾಸ ಅಥವಾ ದಂಡ .
ಹೀಗೆ ಪೋಲೀಸರು ಚಲಾಯಿಸುವ ಭಾರತೀಯ ದಂಡ ಸಂಹಿತೆಯಲ್ಲಿಯೂ ,ಸಹ ಸಾರ್ವಜನಿಕರ ಹಿತದೃಷ್ಟಿಯಿಂದ ಸಾಕಷ್ಟು ಅಧಿಕಾರವನ್ನು ನೀಡಲಾಗಿದೆ.
ಭಾರತದ ಸಂವಿಧಾನದಲ್ಲಿ ತೂಕ ಮತ್ತು ಅಳತೆಗಳ ಪ್ರಸ್ತಾಪ:
ಭಾರತದ ಸಂವಿಧಾನದಲ್ಲಿ ತೂಕ ಮತ್ತು ಅಳತೆಗಳ ವಿಷಯವನ್ನು "concurrent" ಪಟ್ಟಿಯಲ್ಲಿ ಸೇರಿಸಲಾಗಿದೆ.ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕರೂಪತೆಯ ಮಾಪನ ಪದ್ದತಿಯನ್ನು ಹೊಂದುವಂತಾಗಲು ಮತ್ತು ಅದರ ಲಾಭವು ಸಾಮಾನ್ಯ ಜನತೆಗೆ ತಲುಪುವಂತಾಗಲು ಈ ವಿಷಯವನ್ನು ಸಂವಿಧಾನವು ರಾಷ್ಟ್ರ ಹಾಗೂ ರಾಜ್ಯಗಳಿಗೆ ಸಂಬಂಧಿಸಿದ ವಿಷಯವನ್ನಾಗಿ ಮಾಡಿದೆ.ತೂಕ ಮತ್ತು ಅಳತೆ ಕಾನೂನುಗಳನ್ನು ಜಾರಿಗೊಳಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ಧಾರಿಯಾಗಿದೆ.ದೂರದೃಷ್ಟಿತ್ವವುಳ್ಳ ಭಾರತದ ಸಂವಿಧಾನವು ತೂಕ ಮತ್ತು ಅಳತೆಗಳ ವಿಷಯದ ಬಗ್ಗೆ ಸ್ಪಷ್ಟವಾದ ನಿರ್ದೇಶನವನ್ನು ನೀಡಿದೆ.ಅದೇ ನಿಟ್ಟಿನಲ್ಲಿ ಇಡೀ ದೇಶಕ್ಕೆ ಅನ್ವಯವಾಗುವಂತೆ ತೂಕ ಮತ್ತು ಅಳತೆ ಕಾನೂನುಗಳನ್ನು ಕೇಂದ್ರ ಸರ್ಕಾರವು ರೂಪಿಸುತ್ತಿದ್ದು,ಈ ಕಾನೂನುಗಳನ್ನು ಎಲ್ಲಾ ರಾಜ್ಯ ಸರ್ಕಾರಗಳು ಜಾರಿಗೊಳಿಸುತ್ತಿವೆ.
ತೂಕ ಮತ್ತು ಅಳತೆಗಳ ಧಾರ್ಮಿಕ ಮಹತ್ವ:
ತೂಕ ಮತ್ತು ಅಳತೆ ವಿಷಯಕ್ಕೆ ಕಾನೂನಿನಲ್ಲಷ್ಟೇ ಅಲ್ಲ.ಇದಕ್ಕೆ, ಧಾರ್ಮಿಕ ಮಹತ್ವವೂ ಸಹ ಇದೆ.ಹಿಂದೆ ರಾಜಮಹಾರಾಜರು ತಮ್ಮ ಆಡಳಿತದಲ್ಲಿ ಪಾರದರ್ಶಕತೆಯನ್ನು ಮತ್ತು ಸಮಾನತೆಯನ್ನು ತೋರಿಸಲು "ಧರ್ಮ ಕಾಂಟ"ಗಳನ್ನು ಸ್ಥಾಪಿಸುತ್ತಿದ್ದರು.ವ್ಯಾಪಾರ ವಹಿವಾಟುಗಳಲ್ಲಿ ನ್ಯಾಯಪರತೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದರು.ಧಾರ್ಮಿಕ ಗ್ರಂಥಗಳಲ್ಲಿ ತೂಕ ಮತ್ತು ಅಳತೆಗಳ ಮಹತ್ವವನ್ನು ಈ ಕೆಳಕಂಡಂತೆ ಉಲ್ಲೇಖಿಸಲಾಗಿದೆ.
ಮನು ಸ್ಮೃತಿಯಲ್ಲಿ : ವಸ್ತುಗಳನ್ನು ಒಂದನ್ನೊಂದು ಕಲಬೆರಕೆ ಮಾಡಿ ಮಾರಬಾರದು.ಕೆಟ್ಟದ್ದನ್ನು ಒಳ್ಳೆಯದೆಂದು ಹೇಳಿ,ತೂಕದಲ್ಲಿ ಮೋಸ ಮಾಡಿ,ಕಣ್ಣಿಗೆ ಕಾಣದಂತೆ ದೂರದಿಂದ ವ್ಯತ್ಯಾಸ ಮಾಡಬಾರದು.(ಅಧ್ಯಾಯ-8,ಶ್ಲೋಕ 203)
ಕುರಾನ್ ನಲ್ಲಿ : ತೂಕದಲ್ಲಿ ಕಡಿತಗೊಳಿಸಿ ಕೊಡುವವರಿಗೆ ವಿನಾಶವಿದೆ.ಅವರು ಜನರಿಂದ ಪಡೆಯುವಾಗ ಸಂಪೂರ್ಣವಾಗಿ ಪಡೆಯುತ್ತಾರೆ.ಆದರೆ,ತೂಕ ಮಾಡಿ ಅಥವಾ ಅಳತೆ ಮಾಡಿ ಕೊಡುವಾಗ ಕಡಿಮೆ ಕೊಡುತ್ತಾರೆ.ಪುನರುತ್ಥಾನ ದಿನದಂದು ಇವರನ್ನು ಎಬ್ಬಿಸಿ ತರಲಾಗುವುದೆಂದು ಇವರು ಗ್ರಹಿಸುವುದಿಲ್ಲವೇ? ಆದುದರಿಂದ ಅವರ ವಿನಾಶ ನಿಶ್ಚಯ.(ಭಾಗ-30,ಅಧ್ಯಾಯ 83)
ಬೈಬಲ್ ನಲ್ಲಿ : ಮೋಸದ ತಕ್ಕಡಿ ಕರ್ತನಿಗೆ ಅಸಹ್ಯವಾಗಿದೆ.ನ್ಯಾಯದ ತೂಕವು ಆತನಿಗೆ ಆನಂದವಾಗಿದೆ.(proverbs-11)(ಹಳೆಯ ಒಡಂಬಡಿಕೆ)ವಿಧವಿಧವಾದ ತೂಕಗಳೂ ತರತರವಾದ ಅಳತೆಗಳೂ ಇವೆರಡೂ ಸಮವಾಗಿಯೇ ಕರ್ತನಿಗೆ ಅಸಹ್ಯ.(proverbs-20)(ಹಳೆಯ ಒಡಂಬಡಿಕೆ)

ಕಾಮೆಂಟ್‌ಗಳಿಲ್ಲ: